
ಬೆಂಗಳೂರು: ಜನ ಸಾಮಾನ್ಯರು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸಿ ಅಂತಿಮ ವರದಿ ಅಥವಾ ದೋಷಾರೋಪಣೆ ಪಟ್ಟಿ (ಚಾರ್ಜ್ ಶೀಟ್) ಸಿದ್ದಪಡಿಸುತ್ತಾರೆ. ಹೀಗೆ ತನಿಖೆ ನಡೆಸಿ ಸಿದ್ದಪಡಿಸಿದ ಅಂತಿಮ ವರದಿ ಅಥವಾ ಚಾರ್ಜ್ ಶೀಟ್ ಅನ್ನು ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಹೀಗಾಗಿ ದೂರುದಾರರಿಗೆ ತಾವು ನೀಡಿದ ದೂರಿನ ಮೇರೆಗೆ ಪೊಲೀಸರು ಏನು ಮಾಡಿದರು, ಕೇಸಿನ ಸ್ಥಿತಿಗತಿ ಏನು ಎಂಬುದೇ ತಿಳಿಯುವುದಿಲ್ಲ.
ದೂರುದಾರರಿಗೆ ತಮ್ಮ ಕೇಸಿನ ವಿಚಾರವಾಗಿ ಪೊಲೀಸರು ಏನೆಲ್ಲಾ ತನಿಖೆ ನಡೆಸಿದ್ದಾರೆ, ಯಾವೆಲ್ಲಾ ಸಾಕ್ಷ್ಯ ಸಂಗ್ರಹಿಸಿದ್ದಾರೆ, ಅಥವಾ ಬೇರಿನ್ನಾವುದಾದರೂ ಕ್ರಮ ಜರುಗಿಸಿದ್ದಾರೆಯೇ ಎಂಬುದು ತಿಳಿಯದಿದ್ದಾಗ ದೂರುದಾರರಿಗೆ ಅಥವಾ ಸಂತ್ರಸ್ತರಿಗೆ ಮುಂದೆ ತಾವೇನು ಕ್ರಮ ಕೈಗೊಳ್ಳಬೇಕು ಎಂಬುದು ಕೂಡ ಗೊತ್ತಾಗುವುದಿಲ್ಲ. ಆದರೆ, ಕಾನೂನು ರೀತಿಯಲ್ಲಿ ಪೊಲೀಸರು ತನಿಖೆ ನಡೆಸಿದ ನಂತರ ಸಿದ್ದಪಡಿಸುವ ಅಂತಿಮ ವರದಿ ಅಥವಾ ಚಾರ್ಜ್ ಶೀಟ್ ಅನ್ನು ದೂರುದಾರರಿಗೂ ನೀಡಬೇಕಿರುತ್ತದೆ.
ಯಾವುದೇ ಒಂದು ಅಪರಾಧ ಕೃತ್ಯ ನಡೆದಾಗ ಸಂತ್ರಸ್ತರು ಅಥವಾ ಕೃತ್ಯವನ್ನು ತಿಳಿದವರು ಪೊಲೀಸರಿಗೆ ಮಾಹಿತಿ ನೀಡಬೇಕಿರುತ್ತದೆ. ಹೀಗೆ ಮಾಹಿತಿ ಪಡೆದ ಪೊಲೀಸರು ಪ್ರಥಮ ವರ್ತಮಾನ ವರದಿ ಅಥವಾ ಎಫ್ಐಆರ್ ದಾಖಲಿಸಿ ಅದನ್ನು ಸಂಬಂಧಪಟ್ಟ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸುತ್ತಾರೆ. ಆ ಬಳಿಕ ತನಿಖೆ ನಡೆಸಿ ಅಂತಿಮ ವರದಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಈ ವೇಳೆ ಪೊಲೀಸರು ಅಂತಿಮ ವರದಿ ಅಥವಾ ಚಾರ್ಜ್ ಶೀಟ್ ನ ಪ್ರತಿಯೊಂದನ್ನು ದೂರುದಾರರಿಗೂ ನೀಡಬೇಕಿರುತ್ತದೆ. ಈ ಕುರಿತಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ ವಿವರವಾಗಿ ಹೇಳಲಾಗಿದೆ.
ಬಿಎನ್ಎಸ್ ನಲ್ಲೇನಿದೆ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 193(3)(i)ರ [ಸಿಆರ್ಪಿಸಿ ಸೆಕ್ಷನ್ 173(2)(i)] ಪ್ರಕಾರ ಪ್ರಕರಣದ ತನಿಖೆ ಪೂರ್ಣಗೊಳ್ಳುತ್ತಲೇ ತನಿಖಾ ವರದಿಯನ್ನು ಅರ್ಥಾತ್ ಅಂತಿಮ ವರದಿ ಅಥವಾ ಚಾರ್ಜ್ ಶೀಟ್ ಅನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಬೇಕಿರುತ್ತದೆ. ಅದೇ ರೀತಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 193(3)(iii)ರ [ಸಿಆರ್ಪಿಸಿ ಸೆಕ್ಷನ್ 173(2)(ii)] ಪ್ರಕಾರ ದೂರುದಾರನಿಗೆ ಅಥವಾ ಪ್ರಥಮ ಮಾಹಿತಿದಾರನಿಗೆ ತನಿಖಾ ವರದಿಯ ಕುರಿತು ಮಾಹಿತಿ ನೀಡಬೇಕಿರುತ್ತದೆ. ಇದು ಪೊಲೀಸರ ಶಾಸನಬದ್ಧ ಕರ್ತವ್ಯವಾಗಿರುತ್ತದೆ.
ದೂರುದಾರರಿಗೇಕೆ ಅಂತಿಮ ವರದಿಯ ಮಾಹಿತಿ ನೀಡಬೇಕು: ದೂರುದಾರ ಅಥವಾ ಸಂತ್ರಸ್ತರಿಗೆ ತಾವು ನೀಡಿದ ದೂರಿನ ಮೇರೆಗೆ ಪೊಲೀಸರು ಸೂಕ್ತ ತನಿಖೆ ಮಾಡಿದ್ದಾರೆಯೇ, ಇಲ್ಲವೇ ಎಂಬುದನ್ನು ತಿಳಿಯಲು ಹಾಗೂ ಒಂದೊಮ್ಮೆ ಸೂಕ್ತ ರೀತಿಯಲ್ಲಿ ತನಿಖೆ ಮಾಡಿಲ್ಲದೇ ಹೋದಲ್ಲಿ ಸಂತ್ರಸ್ತ ಕಾನೂನು ರೀತಿ ಪರಿಹಾರ ಪಡೆಯಲು ಮುಂದಿನ ಕ್ರಮಗಳನ್ನು ಅನುಸರಿಸಲು ಅನುಕೂಲವಾಗಲಿ ಎಂದು ಶಾಸನ ನಿರ್ಮಾತೃಗಳು ಈ ನಿಯಮವನ್ನು ಕಾಯ್ದೆಯಲ್ಲಿ ಸೇರಿಸಿದ್ದಾರೆ. ಹೀಗಾಗಿ, ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವ ಪೊಲೀಸರು ಅಂತಿಮ ವರದಿಯ ಪ್ರತಿಯನ್ನು ದೂರುದಾರರಿಗೂ ನೀಡಬೇಕಿರುತ್ತದೆ.
ಮಹತ್ವದ ಪ್ರಕರಣಗಳು: ದೂರುದಾರರಿಗೆ ತನಿಖೆಯ ಅಂತಿಮ ವರದಿಯ ಮಾಹಿತಿಯನ್ನು ಪೊಲೀಸರು ನೀಡಬೇಕಾದ ಕರ್ತವ್ಯದ ಕುರಿತು ಕರ್ನಾಟಕ ರಾಜ್ಯ ಹೈಕೋರ್ಟ್, ಪ್ರಶಾಂತ್ ಹೆಗ್ಡೆ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ (WRIT PETITION NO.18864 OF 2021 (GM-RES) ಸ್ಪಷ್ಟವಾಗಿ ಹೇಳಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ದೂರುದಾರರಿಗೆ ತನಿಖೆಯ ಮಾಹಿತಿ ನೀಡುವಂತೆ ರಾಜ್ಯದ ಎಲ್ಲ ತನಿಖಾಧಿಕಾರಿಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ. ಮಾಹಿತಿ ನೀಡಿದ ವ್ಯಕ್ತಿಗೆ ಅಥವಾ ದೂರುದಾರನಿಗೆ/ಸಂತ್ರಸ್ತನಿಗೆ ತನಿಖಾ ವರದಿಯ ವಿವರ ಸಿಕ್ಕಾಗ ಆತನಿಗೆ ಪ್ರಕರಣದ ಬಗ್ಗೆ ತಿಳಿಯಲು, ಕೇಸನ್ನು ಫಾಲೋಅಪ್ ಮಾಡಲು ಹಾಗೂ ಮುಂದಿನ ಕಾನೂನು ಕ್ರಮಗಳನ್ನು ಅನುಸರಿಸಲು ಅನುಕೂಲವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಅದರಂತೆ ಪೊಲೀಸರು ದೂರು ಸ್ವೀಕರಿಸಿ, ಎಫ್ಐಆರ್ ದಾಖಲಿಸಿ ತನಿಖೆ ಪೂರ್ಣಗೊಳಿಸಿದ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ ಬೆನ್ನಲ್ಲೇ ದೂರುದಾರರಿಗೂ ಆ ಕುರಿತಂತೆ ಮಾಹಿತಿ ನೀಡಬೇಕಿರುತ್ತದೆ.
ಇದೇ ವಿಚಾರವಾಗಿ ಸುಪ್ರೀಂಕೋರ್ಟ್ 1985 ರಲ್ಲಿ ಮಹತ್ವದ ತೀರ್ಪೊಂದನ್ನು ನೀಡಿದೆ. ಭಗವಂತ್ ಸಿಂಗ್ ವರ್ಸಸ್ ಕಮಿಷನರ್ ಆಫ್ ಪೊಲೀಸ್ ಪ್ರಕರಣದಲ್ಲಿ, ಸಿಆರ್ಪಿಸಿ ಸೆಕ್ಷನ್ 173(2)(ii)] ಪ್ರಕಾರ ದೂರುದಾರನಿಗೆ ಅಥವಾ ಪ್ರಥಮ ಮಾಹಿತಿದಾರನಿಗೆ ತನಿಖಾ ವರದಿಯ ಕುರಿತು ಮಾಹಿತಿ ನೀಡಬೇಕಿರುತ್ತದೆ. ಅಂತಿಮ ವರದಿಯ ಪ್ರತಿಯೊಂದನ್ನು ದೂರುದಾರನಿಗೆ ನೀಡಬೇಕಿರುತ್ತದೆ ಎಂದು ಹೇಳಿದೆ. ಅಷ್ಟೇ ಅಲ್ಲದೇ, ಅಂತಿಮ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ದೂರುದಾರರು, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಎದುರು ಯಾವುದಾದರೂ ಆಕ್ಷೇಪಣೆ ಹೇಳಲು ಬಯಸಿದಲ್ಲಿ ಅದನ್ನು ಕೂಡ ದಾಖಲಿಸಬೇಕೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಅದರಂತೆ ದೂರುದಾರರು ತಾವು ನೀಡಿದ ಯಾವುದೇ ದೂರಿನ ಕುರಿತಂತೆ ಪೊಲೀಸರು ನಡೆಸಿದ ತನಿಖೆಯ ಅಂತಿಮ ವರದಿಯನ್ನು ಪಡೆಯುವ ಹಕ್ಕು ಹೊಂದಿದ್ದು, ಅದನ್ನು ಅವಶ್ಯಾನುಸಾರ ಪಡೆದು ಕಾನೂನು ರೀತಿಯಲ್ಲಿ ಮುಂದುವರೆಯಬಹುದಾಗಿರುತ್ತದೆ.
